ಖಾನಾಪುರ: ತಾಲೂಕಿನ ಗೋಧೋಳಿ ಗ್ರಾಮದ ಹೊರವಲಯದ ಧಾರವಾಡ ರಾಮನಗರ ರಾಜ್ಯ ಹೆದ್ದಾರಿಯ ಮೇಲೆ ತಮ್ಮ ಹೊಲಕ್ಕೆ ಹೊರಟಿದ್ದ ನಾಲ್ವರು ರೈತರ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ 3 ರೈತರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. ಗೊಧೋಳಿಯ ನಾಲ್ವರು ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬಿಗೆ ನೀರು ಹಾಯಿಸಲು ಹೊರಟಿದ್ದರು. ಗ್ರಾಮದ ಹೊರವಲಯದಲ್ಲಿ ನಡೆದುಕೊಂಡು ಹೊಲದ ಕಡೆ ಹೊರಟಿದ್ದ ವೇಳೆ ಅಪರಿಚಿತ ವಾಹನವೊಂದು ಹಿಂಬದಿಯಿಂದ ಇವರಿಗಡ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯ, ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಮಾಜಿ ಶಾಸಕ ಅರವಿಂದ ಪಾಟೀಲ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಮತ್ತು ಮೃತರ ದೇಹಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಖಾನಾಪುರ ಸರಕಾರಿ ಆಸ್ಪತ್ರೆಗೆ ತೆರಳಿ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಸಹಕರಿಸಿದರು. ಅಪಘಾತದಲ್ಲಿ ಮೃತರನ್ನು ಗೊಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ (ವಯಸ್ಸು 65) ಮತ್ತು ಪುಂಡಲೀಕ ರೇಡೇಕರ (ವಯಸ್ಸು 72) ಎಂದು ಗುರುತಿಸಲಾಗಿದೆ. ಪುಂಡಲೀಕ ಅವರ ಹಿರಿಯ ಸಹೋದರ ಕೃಷ್ಣ ರೇಡೇಕರ (74) ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಮತ್ತೋರ್ವ ಗಾಯಾಳು ಮಂಜುನಾಥ ಕಾಗಿನಕರ (47) ಅಲ್ಪಪ್ರಮಾಣದ ಗಾಯಗಳಿಂದ ಬಳಲುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಗಡ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾನಾಪುರ ತಾಲೂಕಿನ ಕಾನನದಂಚಿನ ಭಾಗಗಳಲ್ಲಿ ಕೃಷಿ ಜಮೀನುಗಳನ್ನು ಹೊಂದಿರುವ ರೈತರು ರಾತ್ರಿ ವೇಳೆ ಅರಣ್ಯ ಪ್ರದೇಶದ ಮೂಲಕ ಮತ್ತು ವಾಹನ ದಟ್ಟಣೆ ಇರುವ ರಸ್ತೆಗಳ ಮೂಲಕ ತಮ್ಮ ಹೊಲಗಳಿಗೆ ನೀರು ಹಾಯಿಸಲು ಹೋಗುವ ಸಂದರ್ಭದಲ್ಲಿ ಅವರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಸಾಗುವ ಅನಿವಾರ್ಯತೆ ಇದೆ. ರೈತರು ಹೊಲಕ್ಕೆ ಹೋಗುವಾಗ ಕ್ರೂರ ಪ್ರಾಣಿಗಳ ದಾಳಿ ಅಥವಾ ಇನ್ನಿತರೆ ತೊಂದರೆಗಳನ್ನು ಎದುರಿಸುತ್ತಿದ್ದು, ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಹೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.